ಬೆಕೆರಲ್, ಆಂಟ್ವಾನ್ ಹೆನ್ರಿ
1852-1908. ಫ್ರಾನ್ಸಿನ ಭೌತವಿಜ್ಞಾನಿ. ನೈಸರ್ಗಿಕ ವಿಕಿರಣಪಟುತ್ವದ ಆವಿಷ್ಕಾರಕ್ಕಾಗಿ ನೊಬೆಲ್ ಪಾರಿತೋಷಿಕ ಪಡೆದ (1903) ಮೇಧಾವಿ. 1852 ಡಿಸೆಂಬರ್ 15ರಂದು ಪ್ಯಾರಿಸ್ಸಿನಲ್ಲಿ ಜನನ. ತಂದೆ ಎಡ್ಮಂಡ್ ಬೆಕೆರಲ್ (1820-91) ಭೌತವಿಜ್ಝಾನಿ. ಈತ ಪ್ರತಿದೀಪ್ತಿ ಮತ್ತು ಸ್ಫುರ ದೀಪ್ತಿ ಕುರಿತಂತೆ ವಿಶೇಷ ಅಧ್ಯಯನ ನಡೆಸಿದ್ದ. ತಾತ ಆಂಟ್ವಾನ್ ಸೇeóÁರ್ ಬೆಕೆರಲ್ (1788-1878) ಕೂಡ ಭೌತ ವಿಜ್ಞಾನಿಯೇ; ಪ್ಯಾರಿಸ್ಸಿನ ಮ್ಯೂಸಿಯಮ್ ದ ಹಿಸ್ಟ್ರೊಯ್ರ್ ನ್ಯಾಚುರಲ್ ಸಂಸ್ಥೆಯಲ್ಲಿ ಭೌತ ವಿಜ್ಞಾನದ ಪ್ರಾಧ್ಯಾಪಕನಾಗಿದ್ದ ಹೆನ್ರಿ ಬೆಕೆರಲನ ತಾಂತ್ರಿಕ ವಿದ್ಯಾಭ್ಯಾಸ ಪ್ಯಾರಿಸ್ಸಿನ ಇಕೋಲೆ ಪಾಲಿಟೆಕ್ನಿಕ್ ತಾಂತ್ರಿಕ ಶಾಲೆಯಲ್ಲಿ ನಡೆಯಿತು. ಅನಂತರ ಇಕೋಲೆ ದ ಪಾಂಟ್ಸ್-ಎಟ್-ಚಾಸೀಸ್ ಎಂಜಿನಿಯರಿಂಗ್ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ಎಂಜಿನಿಯರ್ ಪದವಿ ಪಡೆದ (1877). ಇದಕ್ಕೆ ಮುಂಚೆ ಇಕೋಲೆ ಪಾಲಿಟೆಕ್ನಿಕ್ ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದ (1876). ಮುಂದೆ ಸರ್ಕಾರದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ವಿಭಾಗದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ. 1884ರಲ್ಲಿ ಡಾಕ್ಟೊರೇಟ್ ಪದವಿ ಪಡೆದ. 1894ರಲ್ಲಿ ಮುಖ್ಯ ಎಂಜಿನಿಯರ್ ಆಗಿಯೂ 1895ರಲ್ಲಿ ಇಕೋಲೆ ಪಾಲಿಟೆಕ್ನಿಕ್ಕಿನಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕನಾಗಿಯೂ ನೇಮಕಗೊಂಡ. ಇವಲ್ಲದೆ ಕಾಂಜರ್‍ವೆಟ್ಯೂ ದಾ ಆಟ್ರ್ಸ್ ಉಟ್ ಮೆಟಿಯರ್ಸ್ ಸಂಸ್ಥೆಯಲ್ಲಿ ಈತನ ತಂದೆ ನಿರ್ವಹಿಸುತ್ತಿದ್ದ ಅನ್ವಿತ ಭೌತವಿಜ್ಞಾನ ಪ್ರಾಧ್ಯಾಪಕ ಹುದ್ದೆಯೂ ಒದಗಿಬಂತು. ಹೀಗಾಗಿ ಏಕಕಾಲಕ್ಕೆ ಎಂಜಿನಿಯರ್ ಆಗಿಯೂ ಪ್ರಾಧ್ಯಾಪಕನಾಗಿಯೂ ಕಾರ್ಯನಿರ್ವಹಿಸುವ ಖ್ಯಾತಿ ಹೆನ್ರಿ ಬೆಕೆರಲನದು. 
 
	ತನ್ನ ತಂದೆ ನಡೆಸಿದ್ದ ಸಂಶೋಧನೆಗಳನ್ನು ಬೆಕೆರಲ್ ಮುಂದುವರಿಸಿದ. ಇವು ದ್ಯುತಿ ವಿಜ್ಞಾನ ಕುರಿತವು. ಧ್ರುವೀಕೃತ ಬೆಳಕಿನ ಸಮತಲ ಕಾಂತ ಕ್ಷೇತ್ರದಲ್ಲಿ ಆವರ್ತಿಸುವುದರ ಬಗ್ಗೆ ಈತ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ. ಈ ಪರಿಣಾಮವನ್ನು ಇಂಗ್ಲೀಷ್ ಭೌತ ಹಾಗೂ ರಸಾಯನ ವಿಜ್ಞಾನಿ ಮೈಕಲ್ ಫ್ಯಾರಡೆ (1791-1867) ಘನ ಮತ್ತು ತರಲ ಮಾಧ್ಯಮಗಳಲ್ಲಿ ಕಂಡು ಕೊಂಡಿದ್ದ. ಅನಿಲಗಳಲ್ಲೂ ಈ ತೆರನ ಪರಿಣಾಮ ಸಾಧ್ಯ ಎಂದು ಬೆಕೆರಲ್ ತೋರಿಸಿಕೊಟ್ಟ. ಕೆಲವೊಂದು ಪದಾರ್ಥಗಳನ್ನು ಬೆಳಕಿಗೆ ಒಡ್ಡಿ ಕತ್ತಲಿನ ಕೋಣೆಯೊಳಕ್ಕೆ ತಂದಾಗ ಅವು ಪ್ರಕಾಶದಿಂದ ಬೆಳಗುವುದನ್ನು ಬೆಕೆರಲ್ ಗಮನಿಸಿದ್ದ. ಈ ವಿದ್ಯಮಾನಕ್ಕೆ ಸ್ಫುರದೀಪ್ತಿ (ಫಾಸ್ಫಾರಿಸೆನ್ಸ್) ಎಂದು ಹೆಸರು. ಇದನ್ನು ವೀಕ್ಷಿಸಲು ಫಾಸ್ಫರೊಸ್ಕೋಪ್ ಎಂಬ ಉಪಕರಣವನ್ನು ನಿರ್ಮಿಸಿದ. 

	ಜರ್ಮನಿಯ ಭೌತವಿಜ್ಞಾನಿ ವಿಲ್‍ಹೆಲ್ಮ್ ಕೊನ್ರಾಡ್ ರಾಂಟ್‍ಜನ್ (1845-1923) ಎಕ್ಸ್ ಕಿರಣಗಳನ್ನು ಆವಿಷ್ಕರಿಸಿದ (1895) ಬಳಿಕ ವಿವಿಧ ವಿಕಿರಣಗಳನ್ನು ಶೋಧಿಸುವ ಮತ್ತು ಅಭ್ಯಸಿಸುವ ಪ್ರವೃತ್ತಿ ಹೆಚ್ಚಾಯಿತು. ಇಂಗ್ಗಿಷ್ ಭೌತ ಹಾಗೂ ರಸಾಯನ ವಿಜ್ಞಾನಿ ವಿಲಿಯಮ್ ಕ್ರೂಕ್ಸ್ (1832-1919) ರೂಪಿಸಿದ್ದ ಕ್ರೂಕ್ಸ್ ನಳಿಕೆಯಲ್ಲಿಯ ಸ್ಫುರದೀಪ್ತಿ ಮತ್ತು ಪ್ರತಿದೀಪ್ತಿಯ ಬಗ್ಗೆ ಸಂಶೋಧನೆಗಳು ಆಗ ಪ್ರಾರಂಭವಾಗಿ ಆಧಾರರಹಿತವೂ ನಂಬಲು ಅನರ್ಹವೂ ಆದ ವರದಿಗಳು ಬರತೊಡಗಿದ್ದುವು. ಅದೇ ವೇಳೆಗೆ ಬೆಕೆರಲ್ ನೂತನ ನೈಸರ್ಗಿಕ ವಿಕಿರಣಪಟುತ್ವ ಶೋಧಿಸಿರುವುದಾಗಿ ಪ್ಯಾರಿಸ್ಸಿನ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಗೆ ವರದಿ ಮಾಡಿದ (1896).

	ಬೆಕೆರಲನ ಪ್ರಯೋಗ ಬಲು ಸರಳ. ರಾಂಟ್‍ಜೆನ್ನನ ನಳಿಗೆಗಳಲ್ಲಿ ಎಕ್ಸ್‍ಕಿರಣಗಳು ಗಾಜಿನ ಮೂಲಕ ಹೊರಹೊಮ್ಮಿದಾಗ ಗಾಜು ಪ್ರತಿದೀಪ್ತವಾಗುವುದೆಂದು ಇವನಿಗೆ ಗೊತ್ತಾಯಿತು. ಪ್ರತಿದೀಪ್ತಿ ಮತ್ತು ಸ್ಫುರದೀಪ್ತಿ ಕುರಿತಂತೆ ಸಾಕಷ್ಟು ಜ್ಞಾನ ಇತ್ತಾದ ಕಾರಣ ಸ್ಫುರದೀಪ್ತಿ ಉಂಟುಮಾಡುವ ಪದಾರ್ಥಗಳು ಎಕ್ಸ್‍ಕಿರಣದಿಂದ ಯಾವುದಾದರೂ ವಿಕಿರಣದ ಬಗ್ಗೆ ಮುನ್ನುಡಿಯಬಹುದೆಂದು ಊಹಿಸಿ ಸಂಶೋಧನೆ ಪ್ರಾರಂಭಿಸಿದ. ಫೋಟೊಗ್ರಾಫಿಕ್ ಕಾಗದವನ್ನು ಕಪ್ಪು ಕಾಗದದಲ್ಲಿ ಸುತ್ತಿ ಬಿಸಿಲಿಗೆ ಇಟ್ಟ.. ಇದರ ಮೇಲೆ ಸ್ಫುರದೀಪ್ತಿ ಬೀರುವ ರಾಸಾಯನಿಕ ಪದಾರ್ಥ ಇತ್ತು. ಬಿಸಿಲು ಒಂದು ವೇಳೆ ಸ್ಫುರದೀಪ್ತಿಯನ್ನು ಉಂಟುಮಾಡುವುದಾದ ಪಕ್ಷಕ್ಕೆ ಮತ್ತು ಸ್ಫುರದೀಪ್ತಿಯಲ್ಲಿ ಎಕ್ಸ್ ಕಿರಣಗಳು ಇದ್ದರೆ ಅವು ಸಾಮಾನ್ಯ ಬೆಳಕು ಮತ್ತು ಅತಿನೀಲಿ ಬೆಳಕುಗಳಂತೆಯೇ ಕಾಗದದ ಒಳಹೋಗುತ್ತದೆ ಎಂಬುದು ಅವನ ಅಭಿಪ್ರಾಯ. ಕಾಗದದ ಮೇಲೆ ಇದ್ದ ವಸ್ತು ಯುರೇನಿಯಮ್ ಪರಮಾಣುಗಳು ಇರುವ ಪೊಟ್ಯಾಸಿಯಮ್ ಯುರನೈಲ್ ಸಲ್ಫೇಟ್ ಆಗಿತ್ತು. ಪಟಿಲವನ್ನು ಪ್ರಸ್ಫುಟನಗೊಳಿಸಿ ನೋಡಿದಾಗ ಅದು ಮಬ್ಬಾಗಿದ್ದದ್ದು ಕಂಡುಬಂತು. ವಿಕಿರಣಗಳು ಕಪ್ಪು ಕಾಗದವನ್ನು ಒಳಹೊಕ್ಕಿದ್ದು ತಿಳಿಯಿತು. ಸ್ಫುರದೀಪ್ತಿ ವಿದ್ಯಮಾನದಲ್ಲಿ ಎಕ್ಸ್‍ಕಿರಣಗಳು ಉಂಟಾಗುವುವೆಂದು ಬೆಕೆರಲ್ ತೀರ್ಮಾನಿಸಿದ. 

	ಮುಂದೆ ಮೋಡಕವಿದ ವಾತಾವರಣ ಒದಗಿ ಪ್ರಯೋಗಗಳನ್ನು ಮುಂದುವರಿಸಲಾಗಲಿಲ್ಲ. ಒಮ್ಮೆ ಫೋಟೊಗ್ರಾಫಿಕ್ ಪಟಲವನ್ನು ಕಪ್ಪುಕಾಗದದಲ್ಲಿ ಚೆನ್ನಾಗಿ ಸುತ್ತಿ ಮೇಜಿನಖಾನೆ ಒಳಗೆ ಇಟ್ಟಿದ್ದ. ಅದರ ಮೇಲೆ ಕೆಲವೊಂದು ಸ್ಪಟಿಕಗಳು ಇದ್ದುವು. ಕಾಯುವುದರ ತಾಳ್ಮೆಯನ್ನು ಕಳೆದುಕೊಂಡವನಾಗಿ ಪಟಲಗಳನ್ನು ಪ್ರಸ್ಫುಟಿಸಲು ತೀರ್ಮಾನಿಸಿ ಹಾಗೆ ಮಾಡಿ ನೋಡಲು ಪಟಲ ಸೂರ್ಯಬೆಳಕಿಗೆ ಒಡ್ಡಿರದಿದ್ದರೂ ಕಾಗದ ಅಲ್ಲಿದ್ದ ಸ್ಫಟಿಕಗಳಿಂದ ಪ್ರಭಾವಿತವಾಗಿ ಅದರ ಮೇಲೆ ಮಬ್ಬು ಮೂಡಿತ್ತು. ಸೂರ್ಯನ ಬೆಳಕಿಲ್ಲದಿದ್ದರೂ ಪಟಲ ಅಂಥ ವಸ್ತುಗಳಿಂದ ಮಬ್ಬಾಗುವ ಘಟನೆಯನ್ನು ಬೆಕೆರಲ್ ತೀವ್ರವಾಗಿ ಪರಿಶೀಲಿಸಿದ. ಎಲ್ಲ ದಿಶೆಗಳಲ್ಲೂ ಅದು ಒಂದೇ ಪ್ರಕಾರವಾಗಿ ವಿಕಿರಣವನ್ನು ಹೊರಹೊಮ್ಮಿಸುತ್ತಿದ್ದುದು ಕಂಡುಬಂದಿತು. 1898ರಲ್ಲಿ ಪೋಲಿಷ್-ಫ್ರೆಂಚ್ ರಸಾಯನ ವಿಜ್ಞಾನಿ ಮೇರಿ ಕ್ಯೂರಿ ಎಂಬುವಳು ಈ ವಿದ್ಯಮಾನಕ್ಕೆ ವಿಕಿರಣ ಪಟುತ್ವ (ರೇಡಿಯೊ ಆಕ್ಟಿವಿಟಿ) ಎಂಬ ಹೆಸರನ್ನು ಇತ್ತಳು. ಯುರೇನಿಯಮ್ ವಸ್ತುವಿನಿಂದ ಹೊರಬರುವ ಕಿರಣಗಳಿಗೆ ಬೆಕೆರಲ್ ಕಿರಣಗಳೆಂದೇ ಹೆಸರಾಯಿತು.

	ಈ ವಿಕಿರಣ ಕಾಂತಕ್ಷೇತ್ರದಿಂದ ದಿಕ್ಪಲ್ಲಟ ಹೊಂದಬಹುದು ಎಂಬುದನ್ನು ಬೆಕೆರಲ್ ಗಮನಿಸಿದ (1899). ಇದರಲ್ಲಿ ಚಿಕ್ಕ ಚಿಕ್ಕ ಆವಿಷ್ಟ ಕಣಗಳಿರುತ್ತವೆ; ಇವು ಧನಾವಿಷ್ಟ ಕಣಗಳು; ಎಲೆಕ್ಟ್ರಾನುಗಳಂತೆಯೇ ವೇಗದಿಂದ ಚಲಿಸುತ್ತವೆ ಮುಂತಾದ ತೀರ್ಮಾನಕ್ಕೆ ಬಂದ. ಈ ವಿಕಿರಣಗಳನ್ನು ಕುರಿತಂತೆ ನಡೆಸಿದ ಶೋಧಗಳಿಗಾಗಿ ಬೆಕೆರಲ್ ಮತ್ತು ಕ್ಯೂರಿ ದಂಪತಿಗಳಿಗೆ ನೊಬೆಲ್ ಪಾರಿತೋಷಿಕ ನೀಡಲಾಯಿತು. 

	ಬೆಕೆರಲ್ 1908 ಆಗಸ್ಟ್ 25ರಂದು ಬ್ರಿಟನ್ನಿನ ಕ್ರಾಯಸಿಕ್ಕ್ ಎಂಬಲ್ಲಿ ನಿಧನನಾದ. 
(ಆರ್.ಎಸ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ